ವಿರೂಪಾಕ್ಷ 3 - 
 	ವಿಜಯನಗರ ಸಾಮ್ರಾಜ್ಯದ ಸಂಗಮ ವಂಶದ ದೊರೆ (ಸು. 1465-85). ಇಮ್ಮಡಿ ದೇವರಾಯನ ತಮ್ಮ, ಪ್ರತಾಪದೇವ ರಾಯನ ಮಗ. ಹಲವಾರು ವರ್ಷಗಳ ಕಾಲ ಪೆನುಕೊಂಡೆಯ ಅಧಿಪತಿಯಾಗಿದ್ದ. ಈತ ಮಲ್ಲಿಕಾರ್ಜುನನನ್ನು ಬದಿಗೊತ್ತಿ ಪಟ್ಟಕ್ಕೆ ಬಂದ. ಮಲ್ಲಿಕಾರ್ಜುನನನ್ನು ಇವನು ಕೊಲೆ ಮಾಡಿದನೆಂಬ ನಂಬುಗೆ ಯಿದ್ದರೂ ಮಲ್ಲಿಕಾರ್ಜುನ ಸಿಂಹಾಸನ ಭ್ರಷ್ಟನಾದ ಅನಂತರವೂ ಬದುಕಿದ್ದನೆಂಬ ಊಹೆ ಇದೆ.

	ವಿರೂಪಾಕ್ಷ ವ್ಯಸನಗಳಿಗೆ ಬಲಿಯಾಗಿ ರಾಜ್ಯರಕ್ಷಣ ಶಕ್ತಿಯನ್ನು ಕಳೆದುಕೊಂಡವನಾಗಿದ್ದ. ಇವನ ಕಾಲದಲ್ಲಿ 1470ರಲ್ಲಿ ಬಹಮನೀ ಸುಲ್ತಾನ 3ನೆಯ ಮಹಮ್ಮದ್ ಷಾನ ಮಂತ್ರಿ ಮಹ್ಮೂದ್ ಗವಾನ್ ಗೋವೆಯನ್ನು, ಅದಕ್ಕೂ ಉತ್ತರದ ಕೊಂಕಣ ಕರಾವಳಿಯನ್ನು, ಬೆಳಗಾಂವಿಯ ಸುತ್ತಲ ಪ್ರದೇಶವನ್ನು ವಶಪಡಿಸಿಕೊಂಡ. ಇದರಿಂದ ಸಮುದ ್ರವ್ಯಾಪಾರಕ್ಕೆ ಮುಖ್ಯವಾಗಿದ್ದ ಗೋವ, ದಾಬೋಲಿಮ್ ಮುಂತಾದ ಕರಾವಳಿಯ ಪಟ್ಟಣಗಳು ಮುಸ್ಲಿಮರ ವಶವಾಗಿ, ರಾಜ್ಯದ ಆರ್ಥಿಕ ಹಿನ್ನಡೆಗೆ ಅವಕಾಶ ಮಾಡಿಕೊಟ್ಟಿತು. ಕೇಂದ್ರ ಪ್ರಭುತ್ವದ ಪ್ರಭಾವ ಕ್ಷೀಣಿಸುತ್ತ ಬಂತು. ವಿಜಯನಗರದ ಭವ್ಯತೆ ಅಂದೇ ನಾಶವಾಗುವ ಸ್ಥಿತಿಯಲ್ಲಿದ್ದಿತು. ಚಂದ್ರಗಿರಿಯ ಅಧಿಪತಿಯಾಗಿದ್ದ ಸಾಳುವ ನರಸಿಂಹನ ಸಾಮಥ್ರ್ಯದಿಂದ ಸಾಮ್ರಾಜ್ಯ ಉಳಿಯಿತು. ಇಮ್ಮಡಿ ವಿರೂಪಾಕ್ಷ ಸುಮಾರು 20 ವರ್ಷಗಳ ಕಾಲ ರಾಜನಾಗಿದ್ದ. ಸು. 1485ರಲ್ಲಿ ಇವನನ್ನು ಇವನ ಜೇಷ್ಠ ಪುತ್ರನೇ ಕೊಲೆಮಾಡಿದನೆಂಬ ಹೇಳಿಕೆ ಇದೆ.
										(ಕೆ.ಎಸ್.ಎಸ್.; ಜಿ.ಆರ್.ಆರ್.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ